Saturday, June 26, 2010

‘ ಈಜು ಕಲಿಯೂ ಮುಂಚೆ ಸಾವಿನ ಮನೆಯ ಕದ ತಟ್ಟಿ ಬಂದ ಆ ದಿನದ ನೆನಪು…’

ಕಳೆದ 2 ತಿಂಗಳಿಂದ ನಂಗೆ ಬೆಳಿಗ್ಗೆ 5.40 ಕ್ಕೆ ಸರಿಯಾಗಿ ಎಚ್ಚರ ಆಗಿಬಿಡುತ್ತಿದೆ. ಮುಂಚೆ ಅಂದ್ರೆ 2 ವರ್ಷದಿಂದ ರಾತ್ರಿ 2.15ಕ್ಕೆ ಎದ್ದು Computer ಆನ್ ಮಾಡಿ ನೆಟ್ ಕನೆಕ್ಟ್ ಆಗೀ Torrents ನೆಲ್ಲ ಡೌನ್ಲೋಡ್ ಗೆ ಇಟ್ಟುಪುನ 2.30 ಗೆ ಮಲಗುತ್ತಿದ್ದೆ ಆದರೆ ಈಗ ಎಚ್ಚರ ಆಗೋದೇ 5.40ಕ್ಕೆ. ಎದ್ದು ಹಾಸಿಗೆ ಕ್ಲೀನ್ ಮಾಡಿ, ನಿತ್ಯಕರ್ಮ ಮುಗಿಸಿ Computer ಆನ್ ಮಾಡಿ ಡೌನ್ಲೋಡ್ ಗೆ ಹಾಕುವಷ್ಟರಲ್ಲಿ 6.15 ಆಗಿರುತ್ತೆ. ಅಷ್ಟುಹೊತ್ತಿಗೆ ಅಪ್ಪಾಜಿ ಬಂದು ‘ಏನಪ್ಪಾ ಸ್ವಿಮ್ಮಿಂಗ್ ಗೆ ಹೋಗ್ತೀಯಾ?’ ಅಂತ ಕೇಳ್ತಾರೆ. ನಾನು ‘ಹ್ಞೂ... ಹೋಗುತೀನಿ...’ಅಂತೇನೆ. ಹಾಗೆ ಹೇಳಿದ ತಕ್ಷಣ ಅವರು ಗ್ಯಾರೇಜ್ ಲಾಕ್ ಓಪನ್ ಮಾಡಿ ನನ್ನ ಸ್ಪ್ಲೆಂಡರ್ ಬೈಕ್ ನ ಹೊರಗೆ ನಿಲ್ಲಿಸುತ್ತಾರೆ. ನಾನು ಗಾಡಿ ತಗೊಂಡು 6.15 ಕ್ಕೆ ಬಿಟ್ಟರೆ ವಾಪಸು 7.35 ಕ್ಕೆ ಸ್ವಿಮ್ಮಿಂಗ್ ಮುಗಿಸಿ ಬರ್ತೇನೆ. ಇದು ಸಧ್ಯಕ್ಕೆ 2 ತಿಂಗಳಿಂದ ರೂಟೀನ್ ಆಗಿಬಿಟ್ಟಿದೆ. ಮೊನೆ ಅಂದ್ರೆ ಜೂನ್ 2010 ರ ಮೊದಲವಾರ. ಅವತ್ತು ಶುಕ್ರವಾರ ರಾತ್ರಿ MBA Assignments ಸಬ್ಮಿಟ್ ಮಾಡಲು ನಾಳೆನೇ ಲಾಸ್ಟ್ ಡೇಟ್. ಆಫೀಸ್ ಯಿಂದ ಸಂಜೆ ಬೇಗ ಬಂದವನೆ ಬರೆಯೋಕೆ ಕೂತುಕೊಂಡಿದ್ದೆ. ಊಟಕ್ಕೆ 20 Minutes ಬ್ರೇಕ್ ಬಿಟ್ಟರೆ ಅವತು ಸಂಜೆ 7.30 To 11.45 ವರೆಗೆ ಎಲ್ಲ 6 ಪೇಪರ್ Assignments ಮುಗಿಸಿದಾಗ ಏನೋ ನೆಮ್ಮದಿ. ಲಾಸ್ಟ್ 3 ಸೆಮಿಸ್ಟೆರ್ ಯಿಂದ ಆ ಫೀಲಿಂಗ್ ಗೇ ಹಾಗೆ... ಸೆಮಿನಾರ್ & Assignments ಮುಗಿಸಿಬಿಟ್ಟರೆ ಅರ್ಧ ಸೆಮಿಸ್ಟೆರ್ ಮುಗಿಸಿದಹಾಗೆ. ಹಾಗೆ ಬರೆದು ಮುಗಿಸಿ ಎಲ್ಲಾ ಎತ್ತಿಟ್ಟು ಮಲಗಬೇಕು ಅನ್ನುವಷ್ಟರಲ್ಲಿ ಜೋರಾಗಿ ಮಳೆ ಶುರು ಅಯೀತು. ನನ್ನ ಹಾಸಿಗೆ ಕಿಟಕಿ ಪಕ್ಕ ಇರುವುದರಿಂದ ಮಳೆಯ ಎರಚಲು ಹೊಡೆಯೋಕೆ ಶುರು ಅಯೀತು ತಕ್ಷಣ ಕಿಟಕಿ ಕ್ಲೋಸ್ ಮಾಡಿದೆ. ಕಿಟಕಿ ಕ್ಲೋಸ್ ಮಾಡಿದ ಒಂದು 20 ಸೆಕೆಂಡ್ ನಂತರ ಹಿಂದೆಂದೂ ನನ್ನ ಜೀವನದಲ್ಲಿ ಕೇಳದಷ್ಟು ಜೋರಾಗಿ ಒಂದು ಸಿಡಿಲು ‘ಡಮ್ಮಾರ್...’ ಅಂತ ಹೊಡಿತು. ಒಂದು ಕ್ಷಣ ಹಾಸಿಗೇಲಿ ಬೆಚ್ಚಿದೆ! ತಕ್ಷಣ ಕರೆಂಟ್ ಕೂಡ ಹೊಯೀತು. ಇನ್ನೇನು ಮಾಡೋದು ಅಂತ ಹಾಗೆ ಕಣ್ಣು ಮುಚ್ಚಿ ನಿದ್ರೆಗೆ ಜಾರಿದೆ.

ಬೆಳಿಗ್ಗೆ ಸರಿಯಾಗಿ 5.40 ಎಚ್ಚರ ಅಯೀತು. ಅಲ್ಲೇ ಕಿಟಕಿ ಪಕ್ಕ ಸಣ್ಣದಾಗಿ ಮಳೆ ಹನಿ ಬೀಳೋ ಸದ್ದು. ‘ವಾ.... ಮಳೆ ! ಸ್ವಿಮ್ಮಿಂಗ್ ಏನ್ ಮಾಡೋದಪ್ಪ?...’ ಅನ್ನಿಸಿತು. ಕೂಡಲೆ ಎದ್ದು Computer ಆನ್ ಮಾಡಿ ಡೌನ್ಲೋಡ್ ಗೆ ಹಾಕಿ ನಂತರ ಬಾತ್ರೂಮ್ ಗೇ ಹೋಗಿ ಫ್ರೆಶ್ ಆಗೀ ಬಂದೆ. ಮಳೆ ಸ್ವಲ್ಪ ಕಡಿಮೆ ಆಗಿದೆ ಅನ್ನಿಸಿತು. ಸರಿ ಸ್ವಿಮ್ಮಿಂಗ್ ಹೋಗೋಣ ಅಂತ ಗಾಡಿ ಸ್ಟಾರ್ಟ್ ಮಾಡಿ ಮನೆಯಿಂದ ಹೊರಟೆ. ಮಳೆಗೆ ಇಡೀ ಮೈಸೂರು ಒದ್ದೆ ಆಗಿತ್ತು. ನಮ್ಮ ಮನೆ ಮುಂದೆ ಇದ್ದ ಟಾರ್ ರೋಡ್ ಅನ್ನು ಗುಡಿಸಿ.. ಒರೆಸಿ.. ಸಾರಿಸಿದ ಹಾಗ ಇತ್ತು. ನಮ್ಮ ಮನೆ ರಸ್ತೇಲಿ ನೆಟ್ಟಿದ್ದ ಮಹಾಗನಿ, ಹೊಂಗೆ, ಮೇ ಫ್ಲೋವರ್ ಮುಂತಾದ ಮರಗಳೆಲ್ಲ ಸ್ನಾನಾ ಮಾಡಿ ಫ್ರೆಶ್ ಆಗೀ ನಿಂತಿರುವ ರೀತಿ ಇತ್ತು. ಕೆಲವೊಂದು ಕಡೆ ಗುಲ್ಮೊಹರ್(ಮೇ ಫ್ಲೋವರ್) ನ ಕೆಂಪು ಹೂವುಗಳು ಮಳೆ ಗಾಳಿಗೆ ಉದುರಿ ರಸ್ತೆಗೆಲ್ಲ ರೆಡ್ ಕಾರ್ಪೆಟ್ ಹಾಸಿದಂತೆ ಕಾಣುತಿತ್ತು.
‘ಅಬ್ಬ!!!.... ಇವತ್ತು ಸ್ವಿಮ್ಮಿಂಗ್ ಗೆ ಹೋಗದೆ ಮಲಗಿದ್ದರೆ ಎಂಥ ಒಳ್ಳೆ ವಾತಾವರಣ ನೋಡು ಚಾನ್ಸ್ ಮಿಸ್ ಆಗ್ತಾ ಇತ್ತಲ್ಲ...’ ಅನ್ನಿಸಿತು. ಹಾಗೆ ಚರ್ಚ್ ಪಕ್ಕ ಇದ್ದ ಪೋಲಿಸ್ ಸ್ಟೇಷನ್ ದಾಟಿ ಮುಂದೆ ಸಾಗಿ ವಿಶ್ವಮಾನವ ಡಬಲ್ ರೋಡಿಗೆ Join ಆದೆ. ಸಾಕಷ್ಟು ಜನ ರಸ್ತೆಯ ಎರಡು ಭಾಗದಲ್ಲೂ ವಾಕ್ ಮಾಡುತ್ತಿದ್ದರು. ಗಾಡಿನ ನಾನು ಇವತ್ತು ಸ್ವಲ್ಪ ಸ್ಲೋ ಆಗೀ ಅಂದ್ರೆ, ಅಂದಾಜು 35 kms ಸ್ಪೀಡ್ ನಲ್ಲಿ ಓಡಿಸ್ತಾ ಇದ್ದೆ. ತಣ್ಣನೆಯ ಶೀತ ಗಾಳಿ ನನ್ನ ಮುಖ ಸವರಿ ಹೋದ ಅನುಭವ ಆಗ್ತ ಇತ್ತು. ಏನೇ ಹೇಳಿ.. ಬೆಳಗ್ಗೆ ಈ ರೀತಿ ಚನ್ನಾಗಿ ಮಳೆ ಬಿದ್ದ ನಂತರ ಇರುವ ತಂಪು ಹವಾಮಾನದಲ್ಲಿ, ಸುತ್ತ ಮುತ್ತ ಹಸಿರು ಇರೋ ಜಾಗದಲ್ಲಿ ಒಮ್ಮೆ ದೀರ್ಘವಾಗಿ ಉಸಿರೆಳೆದು ಕೊಂಡು Lungs fill ಮಾಡಿಕೊಂಡರೆ, ಆಗ ಸಿಗುವ ಆನಂದನೇ ಬೇರೆ... ಅವತ್ತು ನನಗೆ ‘ Feel The Nature ’ ಅನ್ನೋ ವಾಕ್ಯದ ನಿಜವಾದ ಅನುಭವ ಆಯಿತು. ‘ಮೈಸೂರ್ ನಂತಹ ಊರಿನಲ್ಲಿ ಸೆಟ್ಲ್ ಅಗೀರೋದು ನನ್ನ ಪುಣ್ಯ..’ಅಂತ ಅನ್ನಿಸಿತು. ಯಾರೇ ಮೈಸೂರ್ ಬಗ್ಗೆ ಕೇಳಲಿ, ನಾನಂತೂ ಯಾವಾಗಲು ಮೈಸೂರ್ ಅಂತ ಕೂಲ್, ಬೆಸ್ಟ್ ಟೂರೀಸಂ, ಹಿಸ್ಟಾರಿಕಾಲ್, ಕಲ್ಚರಲ್ ಸಿಟಿ , ಸೈಟಿಫಿಕಲಿ Important ಆದ ಜಾಗ ಇನ್ನೊದು ಇಲ್ಲ ಅಂತೆನೆ. ಕರೆಕ್ಟ್ ಆಗೀ ಪ್ಲಾನ್ ಮಾಡಿದರೆ ಮೈಸೂರ್ ಸುತ್ತ ಮುತ್ತ ವಿತಿನ್ 90 kms radius ನಲ್ಲಿ ಬೇಕಾದ್ರೆ 10 ದಿನ ಬೋರ್ ಆಗದ ಹಾಗೆ ತಿರುಗಾಡೋ ಜಾಗಗಳಿವೆ. ಹಾಗೆ ಯಾವಾಗಲು ನನ್ನ ತಂಗಿ ರಾಜಮಣಿ ಹೇಳುತಿದ್ದ ಮಾತು ನೆನಪಿಗೆ ಬಂತು. ಅವಳು ‘ಏನೇ ಹೇಳು ಲೋಕು ನಮ್ಮ ನಮ್ಮ ಊರು ನಮಗೆ ಸವಿ ಬೆಲ್ಲ ಅಲ್ಲವ...?’ ಅನ್ನುತಿದ್ದಳು. ಪಿ.ವಿ.ಆರ್. ಒಂದನ್ನಾ ಬಿಟ್ಟು ಮೈಸೂರ್ ನಲ್ಲಿ ಏನು ಇಲ್ಲ ಅನ್ನೋ ಹಾಗೆ ಇಲ್ಲಾ ಅಲ್ಲವಾ..? ಅಂತ ಯೋಚನೆ ಮಾಡುವಷ್ಟರಲ್ಲಿ ಸರಸ್ವತಿಪುರಂನಾ J S S ಗರ್ಲ್ಸ್ ಕಾಲೇಜ್ ಪಕ್ಕ ಇರೋ ಮೈಸೂರು ಯೂನಿವೆರ್ಸಿಟಿ ಸ್ವಿಮ್ಮಿಂಗ್ ಪೂಲ್ ಬಂತು.

ಗಾಡಿ ಸ್ಟ್ಯಾಂಡಿನಲ್ಲಿ ಹೆಚ್ಚಿಗೆ ಗಾಡಿಗಳು ಇರಲಿಲ್ಲ. ನಾನು ನನ್ನ ಗಾಡಿ ನಿಲ್ಲಿಸಿ Entrance ಗೆ ಬಂದೆ. Entranceನಲ್ಲಿ ಟಿಕೆಟ್ ಕೌಂಟರ್ ಇದೆ. ಅಲ್ಲೆ ಪಕ್ಕ ಬಲಕ್ಕೆ ಒಂದು ಪ್ಯಾಸೇಜ್ ಲ್ಲಿ ಟಿಕೆಟ್ ಹರಿಯುವವನು (ಪಾಸು ಚೆಕ್ ಕೂಡ ಮಾಡ್ತಾನೆ...) ನಿಂತಿರ್ತನೆ. ಅವನಿಗೆ ಪಾಸು ತೋರಿಸಿ ಒಳಗೆ ಎಂಟರ್ ಆದೆ. ಅಲ್ಲಿ ಎಂಟರ್ ಆದ ಕೊಡಲೇ ಎಡ ಹಾಗು ಬಲಕ್ಕೆ ಒಂದೊಂದು ದೊಡ್ಡ ಸಂಪಿಗೆ ಮರ ಸಿಗುತ್ತದೆ. ಹಾಗೆ ಇನ್ನು ಎರಡು ಹೆಜ್ಜೆ ಮುಂದೆ ಹೋದರೆ ಕಾಣುತ್ತೆ ಸ್ವಿಮ್ಮಿಂಗ್ ಪೂಲ್. ಮೈಸೂರ್ ಗೆ ಅತ್ಯಂತ ದೊಡ್ಡದು ಈ ಮೈಸೂರು ಯೂನಿವೆರ್ಸಿಟಿ ಸ್ವಿಮ್ಮಿಂಗ್ ಪೂಲ್.
100 ಅಡಿ ಉದ್ದ, 50 ಅಡಿ ಅಗಲ. ಆಳ 3 ರಿಂದ 12 ಆಡಿವರೆಗೆ ಇದೆ. ಒಂದು ಬದಿಯಲ್ಲಿ ಒಂದು ಕಾರಿಡಾರ್ ಇದೆ. ಜನರೆಲ್ಲಾ ತಮ್ಮ ಬಟ್ಟೆ, ಟವಲ್ ಅಲ್ಲಿ ಇಡುತಾರೆ, ಅಲ್ಲೇ ಸ್ವಲ್ಪ ಮುಂದಕ್ಕೆ ಹೋದರೆ Toilet ಹಾಗು ಜನರಲ್ Shower bath ಇದ್ದಾವೆ. ಅಲ್ಲಿ Shower ನಲ್ಲಿ ಸ್ನಾನ ಮಾಡಿಯೇ ಪೂಲ್ ಗೆ ಇಳಿಬೇಕು. ಇನ್ನೊಂದು ಬದಿಯಲ್ಲಿ 8 palm ಮರಗಳನ್ನು ನೆಟ್ಟಿದ್ದಾರೆ. 12 ಅಡಿ ಆಳ ಇರು ದಡದಲ್ಲಿ 2 ಜಂಪಿಂಗ್ ಪ್ಲಾಟ್ ಫಾರ್ಮಗಳು ಇದ್ದಾವೆ. ಅದರ ಮುಂದೆ ಒಂದು ದೊಡ್ಡ Fountain ಇದೆ. ಇವತ್ತು ಬೆಳಿಗ್ಗೆ ಮಳೆ ಆಗೋ ಎಲ್ಲ ಲಕ್ಷಣ ಇದ್ದಿದರಿಂದೆನೋ ಪೂಲ್ ನಲ್ಲಿ ಹೆಚ್ಚಿಗೆ ಜನ ಇರ್ಲಿಲ್ಲ. ಜಾಸ್ತಿ ಅಂದ್ರೆ 15 ಜನ ಇದ್ರೂ ಅಷ್ಟೇ. ಸರಿ ನಾನು ಸ್ವಿಮ್ಮಿಂಗ್ Shorts ಹಾಕಿಕೊಂಡು Shower ನಲ್ಲಿ ಸ್ನಾನ ಮಾಡಿ 12 ಅಡಿಗೆ ಬಂದು ಡೈವ್ ಮಾಡಿದೆ. ಹಾಗೆ ಸ್ವಿಮ್ ಮಾಡ್ತಾ, ಫ್ಲೊಟ್ ಮಾಡ್ತಾ 5 ಅಡಿವರೆಗೂ ಬಂದು ಹಾಗೆ ಪೂಲ್ ನ Edgeಗೆ ಒರಗಿ ನಿಂತೆ. ಇದೇ ಒಂದ್ 45 ದಿನಗಳ ಹಿಂದೆ ನೀರೆಂದರೆ ಭಯ, ಹೆದರಿಕೆ ಇದ್ದ ನಾನು ಇವತ್ತು ಪೂಲ್ ನ ಯಾವುದೇ ಮೂಲೇಲಿ, ಎಷ್ಟೇ ಆಳದಲ್ಲಿ ಎತ್ತಾಕಿದರು ಸ್ವಿಮ್ ಮಾಡಿ, ಫ್ಲೊಟ್ ಆಗ್ತಾ ಮೇಲೆ ಬರಬಲ್ಲೆ ಅನ್ನಿಸಿತು.

ಹಾಗೆ ಇದ್ದಕಿದ್ದಂತೆ ನನಗೆ ಫೆಬ್ರುವರಿ 2005 ರಲ್ಲಿ ಉತ್ತರ ಕರ್ನಾಟಕದಲ್ಲಿನ ಪ್ರಸಿದ್ದ ಸ್ಥಳ ‘ಉಳವಿ’ ಹತ್ತಿರ ಇರುವ ‘ಗುಂದು’ ಅನ್ನೋ ಊರಿನ ಸಮೀಪ ಇದ್ದ ‘ಕಾನೇರಿ’ ನದಿಯ ದಡದಲ್ಲಿ ನಡೆದ ಒಂದು ಘಟನೆ ನೆನಪಾಯೀತು. ಆಗ ಇನ್ನು ಫಾರೆಸ್ಟ್ ಡಿಪಾರ್ಟ್ಮೆಂಟ್ ಟ್ರೇನಿಂಗ್ ನಲ್ಲಿ ಇದ್ದೆ. ಉಳವಿಯಲ್ಲಿ ಪ್ರತಿವರ್ಷ ಫೆಬ್ರುವರಿಯಲ್ಲಿ ಬಸವೇಶ್ವರ ಜಾತ್ರೆ ನಡೆಯುತ್ತದೆ. ಅಲ್ಲಿ ಜನರು ಜಾತ್ರೆ ಯಿಂದ ವಾಪಸ್ಸು ಕಾಡು ದಾರಿಯಲ್ಲಿ ಬರುವಾಗ ಕಾಡಿನಲ್ಲಿ ಬೆಳೆದಿರುವ ನಾಗ ಬೆತ್ತ ಗಿಡದಲ್ಲಿ ಬೆತ್ತದ ಕೋಲನ್ನು(Stick) ಕಡಿದುಕೊಂಡು ಮನೆಗೆ ತೆಗೆದುಕೊಂಡು ಹೋಗ್ತಾರೆ. ಹೀಗೆ ಜಾತ್ರೆ ಯಿಂದ ಬರುವಾಗ ಬೆತ್ತವನ್ನು ತಂದರೆ ಮನೆಗೆ ಒಳ್ಳೆಯದಾಗುತ್ತೆದೆ ಅನ್ನೋ ನಂಬಿಕೆ. ಹೀಗೆ ಬೆತ್ತ ಕಡಿಯಲು ಕಾಡು ನುಗ್ಗಿ ಇಡೀ ಕಾಡು ಹಾಳು ಮಾಡ್ತಾರೆ ಅಂತ ಫಾರೆಸ್ಟ್ ಡಿಪಾರ್ಟ್ಮೆಂಟ್ ನವರು ಉಳವಿ ಜಾತ್ರೆ ಟೈಮ್ ನಲ್ಲಿ ಉಳವಿ ಸುತ್ತ ಮುತ್ತ ಮೈನ್ ರೋಡ್ ನಲ್ಲಿ 6 – 7 ಚೆಕ್ ಪೋಸ್ಟ್ ಮಾಡಿ ಅಲ್ಲಿ 15 - 20 ಜನರನ್ನು ಡೆಪ್ಯೂಟ್ ಮಾಡ್ತಾರೆ. ಅಲ್ಲಿ ಜಾತ್ರ ಮುಗಿಯುವಷ್ಟು ದಿನ Day & Night ಶಿಫ್ಟ್ ನಲ್ಲಿ Staff ಗಳು ಜಾತ್ರೆಗೆ ಹೋಗಿ ಬರೋ ಗಾಡಿಗಳನ್ನೆಲಾ ಚೆಕ್ ಮಾಡಿ ಬೆತ್ತ ಇದ್ದರೆ Seizeಮಾಡಬೇಕು. ಹಾಗೆ ನನ್ನನ್ನು ಸೇರಿ 15 ಜನರನ್ನ (ನನ್ನ Batch Foresterಗಳನ್ನು) ‘ಗುಂದು’ ಗೆ ಹಾಕಿದ್ದರು.
ಅಲ್ಲಿ ಒಂದು ಕ್ರಾಸಿಂಗ್ ಹತ್ತಿರ ಟೆಂಪೊರರಿ ಚೆಕ್ ಪೋಸ್ಟ್ create ಮಾಡಿ ಅಲ್ಲೇ ಅಕ್ಕ ಪಕ್ಕ ಟೆಂಟ್ ನ Pitchಮಾಡಿ (ಟೆಂಟ್ ನ ಆರು ಸೈಡ್ ಅನ್ನು, ನೆಲಕ್ಕೆ ಹೂಳಿರುವ ರಾಡ್ ಗೆ ಕಟ್ಟುವುದಕ್ಕೆ ಟೆಂಟ್ Pitching ಅಂತಾರೆ) ಒಂದು ಟೆಂಟ್ ನಲ್ಲಿ ಆರು ಜನ ಇರುವಂತೆ ಹಾಗು ಅಲ್ಲೇ ಪಕ್ಕ 2 kms ದೂರದಲ್ಲಿ ಇದ್ದ I B ಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ದಿನ ಬೆಳಿಗ್ಗೆ ಫ್ರೆಶ್ ಆಗಲು, Toilet ಹಾಗು ಸ್ನಾನಕ್ಕೆ ಗುಂದಿನಿಂದ 8 kms ದೂರದಲ್ಲಿ ‘ಕಾನೇರಿ’ ನದಿ ಹರಿಯುತ್ತಿತು ಅದಕ್ಕೆ ಅಡ್ಡಲಾಗಿ ಒಂದು ಸೇತುವೆ ಕತ್ತಲಾಗಿತ್ತು. ಸೇತುವೆ ಪಕ್ಕ ಇಳಿಜಾರಿನಲ್ಲಿ ನಿಧಾನವಾಗಿ ಇಳಿದು ಕಾನೇರಿ ನದಿಯ ದಡದಲ್ಲಿ ಎಲ್ಲ ಮುಗಿಸಿಕೊಳ್ಳಬೇಕಿತ್ತು. ಡೈಲಿ ನಮ್ಮನ್ನು ಕರೆದೊಯ್ಯಲು ಒಂದು ಸ್ವರಾಜ್ ಮಜ್ದಾ ಗಾಡಿ ವ್ಯವಸ್ಥೆ ಮಾಡಿದ್ದರು. ನಾನು ಮೊದಲನೇ ದಿನ ಅಲ್ಲಿಗೆ ಹೋದಾಗ ಈಜಲು ಹೋಗದೆ ನದಿಯ ದಡದಲ್ಲೇ ಸ್ನಾನ ಮಾಡಿ ಎದ್ದು ಬಂದಿದ್ದೆ.

ಎರಡನೆ ದಿನ ನನ್ನ ಫ್ರೆಂಡ್ಸ್ ಎಲ್ಲಾ jolly ಆಗೀ ನೀರಿನಲ್ಲಿ ಈಜುವುದನ್ನು ನೋಡಿ, ನನಗೂ ಆಸೆಯಾಗಿ ನೀರಿಗಿಳಿದೆ. ನಾನು 1st & 2nd P U ನಲ್ಲಿದ್ದಾಗ ಫ್ರೆಂಡ್ಸ್ ಜೊತೆ ಮೈಸೂರ್ ಇಂದ 25 kms ದೂರದಲ್ಲಿರೋ ಬಲಮುರಿ ಹಾಗು ಎಡಮುರಿ ಅನ್ನೋ ಚಿಕ್ಕ ಫಾಲ್ಸ್ಗೆ ಕಾಲೇಜ್ ಬನ್ಕ್ ಮಾಡಿ ತಿಂಗಳಿಗೆ 1 ಬಾರಿನಾದರು ಹೋಗ್ತಾ ಇದ್ದೆ. ಅಲ್ಲಿ 3 – 4 ಅಡಿ ಆಳದಲ್ಲಿ ಕೈ ಕಾಲು ಆಡಿಸಿದ್ದ ಅನುಭವ ಬಿಟ್ರೆ, ಬೇರೆ ಯಾವತ್ತು ನೀರಿನಲ್ಲಿ ಈಜಾಡಿರಲಿಲ್ಲ. ಆ ಧೈರ್ಯದ ಮೇಲೆ ನದಿಗೆ ಬಿದ್ದು ಈಜಲು ಶುರುಮಾಡಿದೆ. ದಡದಿಂದ ಸುಮಾರು 10 ಅಡಿ ಈಜಿ ಮುಂದೆ ಹೋದೆ . ಎಲ್ಲ ಸರಿಯಾಗೆ ಇತ್ತು. ಕೈ ಕಾಲನ್ನು ನೀರಿನಲ್ಲಿ ಸ್ಯಕ್ಲಿಂಗ್ (cycling) ರೀತಿ ಅಡಿಸ್ತಾ ಇದ್ದೆ. ಗ್ರಚಾರ ಅಂತಾರಲ್ಲ ಹಾಗೆ, ಯಾಕೋ ಒಮ್ಮೆ ಇದಕಿದ್ದಂತೆ ಈಗ ನೀರಿನ ಆಳ ಎಷ್ಟಿದೆ ನೋಡೋಣ ಅಂತ ಅನ್ನಿಸಿ ಕೈ ಕಾಲು ಆಡಿಸುವುದನ್ನು ಬಿಟ್ಟೆ ನೋಡಿ...., ಅಬ್ಬಾ….! ಕಾಲಿಗೆ ಏನು ಸಿಕ್ತಿಲ್ಲ... ಇದ್ದಕಿದ್ದಂತೆ ಮುಳುಗಲು ಶುರು ಮಾಡಿದೆ... ಎಷ್ಟೇ ಪ್ರಯತ್ನಪಟ್ಟರು ಕೈ ಕಾಲು ಆಡಿಸಲು ಆಗ್ತಾ ಇಲ್ಲ. ಒಂದ್ ಸಲ ನೀರ್ ಕುಡಿದು, ಉಸಿರು ಸಿಕ್ಕಿ, ನೀರು ನೆತ್ತಿಗೆ ಏರಿದ ಹಾಗೆ ಆಗೀ ಕೆಮ್ಮಿದೆ. ಯಾಕೋ ಇವತ್ತು ನಾನು ಬದುಕಿ ಉಳಿಯೋದಿಲ್ಲ ಅನ್ನಿಸಿಬಿಟ್ಟಿತು! ಜೀವ ಭಯ ಒಮ್ಮೆಲೆ ಮನಸ್ಸಿಗೆ ನುಗ್ಗಿ ಬಂತು. ಪಕ್ಕದಲ್ಲೇ ಈಜುತಿದ್ದ ಯಾದವ್ ಅನ್ನುವವನಿಗೆ ನಾನು ಹೇಗೂ ಕಷ್ಟ ಪಟ್ಟು ‘ ರೀ... ಯಾದವ್.. ಯಾಕೋ ಮುಳಗುತ್ತ ಇದ್ದೀನಿ ಸ್ವಲ್ಪ ಕೈ ಕೊಡಿ...’ ಅಂದು ಪುನಃ ಮುಳುಗಿದೆ. ಅವನು ನಾನು ತಮಾಷೆ ಮಾಡ್ತಾ ಇದ್ದೀನಿ ಅಂತ ‘ಯೆ.. ಸಾಕು ಬನ್ನಿ ಸುಧಾಕರ್ ಡ್ರಾಮಾ ಮಾಡಬೇಡಿ..’ ಅಂತ ಹೇಳಿ, ಈಜಿ ಮುಂದೆ ಹೋದ. ನೀರನಲ್ಲಿ ಮುಳಗುತ್ತಿದ್ದ ನನಗೆ ಆ ಕ್ಷಣದಲ್ಲೂ ಯಾದವ್ ಮೇಲೆ ಸಿಕ್ಕಪಟ್ಟೆ ಕೋಪ ಬಂತು. ತಕ್ಷಣ ಪಕ್ಕ ನೋಡಿದೆ ಇನ್ನೊಬ್ಬ Batch mate ನರೇಶ್ ಕಾಣಿಸಿದ. ಅವನು ಸ್ನಾನ ಮುಗಿಸಿ ಎದ್ದು ದಡದಲ್ಲಿ ಟವಲ್ ನಿಂದ ಮೈ ಒರೆಸಿಕೊಳ್ತಾ ಇದ್ದ. ನಾನು ‘ ನರೇಶ………’ ಅಂತ ಕೂಗಿ ಪುನ ಮುಳುಗಿದ. ಕೈ ಮೇಲೆ ಇತ್ತು. ಅಬ್ಬ.. ಇವತ್ತಿಗೂ ನರೇಶ್ ನನ್ನ ಕೆಲವು ಸಲ ತಂಪು ಹೊತ್ತಿನಲ್ಲಿ ನೆನೆಸಿಕೊಳ್ಳುತೇನೆ. ನನಗೆ ಈಜು ಬಾರದೆ ಮುಳುಗುತ್ತಿದ್ದನು ನೋಡಿದ ಅವನು ತಕ್ಷಣ ನೀರಿಗೆ ಧುಮುಕಿ ಹತ್ತಿರ ಬಂದು ಕೈ ಚಾಚಿ ನೀಡಿದ. ಅವನ ಕೈ ಮುಟ್ಟಿದ ಆ ಕ್ಷಣ ನನಗೆ ಪುನರ್ಜನ್ಮವಾದಂತೆ ಆಯಿತು. ಹಾಗೆ ನರೇಶನ ಕೈ ಹಿಡಿದುಕೊಂಡು ತಕ್ಷಣ ನೀರಿನ ಮೇಲಕೆ ಬಂದೆ. ಹಾಗೆ ಅವನ್ನ ಹಿಡ್ಕೊಂಡೆ ದಡ ಸೇರಿದೆ. ಏನ್ ಒಂಥರಾ ಷಾಕ್ ಆಗೀ Trance ಗೆ ಹೋಗಿಬಿಟ್ಟೆ. ನರೇಶ ಪುನಃ ಮೈ ಒರಸಿಕೊಂಡು ಬಂದು‘ ಏನೋ ಮಾರಾಯ ಈಜು ಬರೋಲ್ಲ ಅಂದ್ರೆ ಯಾಕ ಅಷ್ಟು ದೂರ ಹೋಗ್ಬೇಕು?..’ ಅಂದ. ಯಾದವ್ ಬಂದು ‘ರೀ ಸುಧಾಕರ್. ಸಾರೀ ಮಾ.. ನನಗೆ ನಿಜವಾಗಲು ನಿಮಗೆ ಈಜು ಬಾರದೆ ಇರೋ ವಿಷಯ ಗೊತ್ತಿರಲಿಲ್ಲ...’ ಅಂದ. ನಾನು 2 ದಿನ ಇಡೀ ಗರ ಬಡಿದವನಂತೆ ಆಗಿ ಬಿಟ್ಟಿದ್ದೆ. ಏನೋ ಒಂಥರಾ ಸಾವಿನ ಹತ್ತಿರ ಹೋಗಿ ಬಂದ ಅನುಭವ. ಅವತ್ತು ನನ್ನ ಅಪ್ಪಾಜಿಯನ್ನು ಮನಸ್ಸಿನಲ್ಲೇ ಸ್ವಲ್ಪ ಬೈದುಕೊಂಡೆ. ನನನ್ನು ಚಿಕ್ಕ ವಯಸ್ಸಿನಲ್ಲೆ ಅವರು ಸ್ವಿಮ್ಮಿಂಗ್ ಸೇರಿಸಿದ್ರೆ ,ಇವತ್ತು ಹಾಗಾಗುತ್ತಿರಲಿಲ್ಲ ಅನ್ನಿಸಿತು.
ಹಾಗೆ ಆ ಘಟನೆ ಯೋಚನೆ ಮಾಡುತ್ತಾ. ಪುನಃ ಪೂಲ್ ನ ಸೆಂಟರ್ ಗೆ ಹೋಗಿ ಇನ್ನೊಂದು Length ಮುಗಿಸಿ ಬಂದೆ. ಪುನಃ 5 ಅಡಿಯ ಕಟ್ಟೆಯ ಬದಿಗೆ ಒರಗಿ ನಿಂತು ಮರಿಮಲ್ಲಪ್ಪ ಸ್ಕೂಲ್ ನಲ್ಲಿ 9th Standard ಓದುತ್ತಿದಾಗ ಕ್ಲಾಸ್ ನಲ್ಲಿ ನನ್ನ ಪಕ್ಕ ಕೂತುಕೊಳ್ಳುತಿದ್ದ ‘ಅಗಿನೇಶ್’ ನನ್ನು ನೆನೆಸಿಕೊಂಡೆ. ಆ ಕಾಲಕ್ಕೆ ಅವನದು ಸ್ವಲ್ಪ Big Shot ಫ್ಯಾಮಿಲಿ. ಅವನ ಮನೇಲಿ ಕಂಪ್ಯೂಟರ್ ಇತ್ತು. ಅದ್ರಲ್ಲಿ Astro ಅನ್ನೋ ಒಂದು DOS Software ಇತ್ತು. ಅದು ಯಾರದಾದರೂ ಹುಟ್ಟಿದ ಟೈಮ್, ಡೇಟ್, ಹುಟ್ಟಿದ ಜಾಗದ Lat & Long ಕೊಟ್ಟರೆ, ಅವರ ಮುಂದಿನ ಭವಿಷ್ಯವನ್ನು Notepad ನ Text ಫಾರ್ಮಾಟ್ ನಲ್ಲಿ 5 – 6 pageಗಳಷ್ಟು ವಿವರಣ ಕೊಡ್ತಾ ಇತ್ತು. ಹಾಗೆ ಒಮ್ಮೆ ನಾನು ಅಗಿನೇಶ್ ಗೆ ನನ್ನ ಡಿಟೈಲ್ಸ್ ಎಲ್ಲಾ ಕೊಟ್ಟು ಕಳಿಸಿದ. ಅವನು ನನ್ನ ಭವಿಷ್ಯವನ್ನು Computer ನಲ್ಲಿ ಪ್ರಿಂಟ್ ಮಾಡಿ ತಂದುಕೊಟ್ಟ. ಒಮ್ಮೆ ಅದನ್ನು ಫುಲ್ ಓದಿದೆ. ಅದನ್ನು ನಂಬಬಾರದು ಅಂತ ಅನ್ನಿಸಿತು. ಆದರೆ ಅದ್ರಲ್ಲಿ (ನನ್ನ ಪ್ರಿಂಟ್ಡ್ ಭವಿಷ್ಯದಲ್ಲಿ) ನನ್ನ ಎಡ ಭಾಗದ Chest ನಲ್ಲಿ ಒಂದು ಮಚ್ಚೆ ಇರುತ್ತೆ ಅಂತ ಕೊಟ್ಟಿದ್ದರು. ಏನೋ ಕಾಕತಾಳಿಯ ಅನ್ನುವಂತೆ ನಿಜವಾಗಿಯೂ ನನಗೆ ನನ್ನ ಎದೆಯ ಎಡಭಾಗದಲ್ಲಿ ಒಂದು ಮಚ್ಚೆ ಇದೆ! ಆ ಪ್ರಿಂಟ್ ನಲ್ಲಿ ಇನ್ನು ಏನೇನೊ ಇತ್ತು. ಬಟ್ Important ಆಗೀ ಇದ್ದ ಇನ್ನೊಂದು ಸಂಗತಿ ಅಂದ್ರೆ ನನಗೆ 22 ನೇ ವಯಸಿನಲ್ಲಿ ಹಾಗು 32 ನೇ ವಯಸಿನಲ್ಲಿ ‘ ಐ ಮೇ ಮೀಟ್ ವಿಥ್ ಎನ್ ವಾಟರ್ ಆಕ್ಸಿಡೆಂಟ್ ( I may meet with an water Accident ) ಅಂತ ಇತ್ತು ಆನೋ ವಿಷಯ ನೆನಪಾಗಿ, ತಕ್ಷಣ ನನಗೆ ಗುಂದಿನ ಕಾನೇರಿ ನದಿಯಲ್ಲಿ ನಡೆದ ಘಟನೆ ನೆನಸಿಕೊಂಡು ‘ಎಲ್ಲ ಬಡ್ಡಿ ಮಗಂದು… ಇದೂ ನಿಜ ಆಗಿಹೊಯಿತಲ್ಲಾ...’ ಅಂತ ಅನ್ನಿಸಿತು. ಹಾಗೆ “ Next In Any Age I’m Ready To battle With Water ” ಅಂತ ಅನ್ನಿಸಿತು.

ಪುನಃ 12 ಫೀಟ್ ನ ಒಂದು ತುದಿಯಲ್ಲಿಗೆ ಬಂದು, Back Stroke ನಲ್ಲಿ ಸ್ವಿಮ್ ಮಾಡುತ್ತ ಮನಸಿನಲ್ಲಿ ಹಾಗೆ ನನ್ನ ಫ್ರೆಂಡ್ ‘Dr, ದಿಲೀಪ್’ ನ ನೆನೆಸಿಕೊಂಡೆ, ಅವತ್ತು ಸಂಜೆ ಅವನು ಸಿಕ್ಕಿಲ್ಲ ಅಂದ್ರೆ ಇವತ್ತು ನಾನು ಈಜು ಕಲಿಯೋಕೆ ಸಾಧ್ಯನೇ ಇರ್ತಿರಲಿಲ್ಲವೇನೋ ಅನ್ನಿಸಿತು. 2 ತಿಂಗಳ ಹಿಂದ ತಾನೆ ಅವನು ಅನೆಸ್ತೆಶಿಯಾದಲ್ಲಿ P G ಮುಗಿಸಿ ಬಿಜಾಪುರದಿಂದ ಮೈಸೂರ್ ಗೆ ವಾಪಾಸಾಗಿದ್ದ.
ಅವನನ್ನು ಭೇಟಿ ಮಾಡಲು ಹೋದೆ. ಸುಮಾರು ತಿಂಗಳ ನಂತರ ಸಿಕ್ಕಿದ ಅವನ ಜೊತೆ ಅದು ಇದು ಮಾತಾಡುತ್ತಾ ಸಿಟಿ ವಿಷ್ಯ ಬಂತು. ಸಿಟಿ ಅಂದ್ರೆ ನನ್ನಇನ್ನೊಬ್ಬ ಫ್ರೆಂಡ್ ‘ಸತೀಶ್’ ಅಂತ. ಅವನು ಸ್ಕೂಲ್, ಕಾಲೇಜ್ ನಲ್ಲಿ ನನ್ನ ಸೀನಿಯರ್. ಯಾವಾಗಲು ‘ಮಗ ಸಿಟಿ(City) ಗೆ ಹೋಗೋಣ’ ಅನ್ನುತಾ ಇರುತ್ತಾನೆ, ಅದಕ್ಕೆ ಎಲ್ಲರೂ ಅವನನ್ನು ‘ಸಿಟಿ’ ಅಂತಾರೆ. So ದಿಲೀಪನಿಗೆ ನಾನು ‘ಮಗ ಸಿಟಿ ಹೇಗೆ ಇದ್ದಾನೆ?...’ ಅಂದೆ. ಅವನು ‘ಸಿಟಿ ಬಿಡು ಮಗ.. ಲೈಫ್ ನ ಫುಲ್ ಫ್ಲೆಡ್ಜ (Full Fledge) ನಲ್ಲಿ ಎಂಜಾಯ್ ಮಾಡ್ತಾ ಇದ್ದಾನೆ..., ವಾರಕ್ಕೆ ಬೆಳಗಿನ ಹೊತ್ತು 5 ದಿನ ಸ್ವಿಮ್ಮಿಂಗ್, ಸಂಜೆ 3 ದಿನ ಮರ್ಷಿಯಾಲ್ ಆರ್ಟ್ಸ್, ಇನು 3 ದಿನ ಸಂಜೆ ಡಾನ್ಸ್, ವೀಕ್ಎಂಡ್ ನಲ್ಲಿ ಬೆಳಿಗ್ಗೆ ಚಾಮುಂಡಿಬೆಟ್ಟ ಹತ್ತುತಾನೆ, ಸಂಜೆ ಪಾರ್ಟಿಗಳು… ಫುಲ್ Fitness freak ಆಗಿ ಬಿಟ್ಟಿದ್ದಾನೆಮಗಾ ಅವನು’ ಅಂದ. ಪುನಃ ‘ಸುಧಾ ಲೆ... ನಿನಗೆ ಸ್ವಿಮ್ಮಿಂಗ್ ಬರುತ್ತಾ?...’ ಅಂದ. ನಾನು ‘ಇಲ್ಲ ಮಗ… ಕಲಿಬೇಕು ಅಂತ ಆಸೆ, ಅದರೆ ಒಬ್ಬನೇ ಹೋಗೋಕೆ ಬೋರ್. ಯಾರೂ Company ಇಲ್ಲ...’ ಅಂದೆ. ತಕ್ಷಣ ದಿಲೀಪ್ ‘ಮಗ ನಾನು ವೊಕಾರ್ಟ್ ಹಾಸ್ಪಿಟಲ್ ಗೆ ರಿಪೋರ್ಟ್ ಮಾಡೋದು ಇನ್ನು 8 ದಿನ ಇದೆ(ಅವನಿಗೆ ವೊಕಾರ್ಟ್ ಹಾಸ್ಪಿಟಲ್ ನಲ್ಲಿ ಪ್ರಾಕ್ಟೀಸ್ ಕಮ್ ವರ್ಕ್ ಮಾಡಲು ಆಫರ್ ಬಂದಿತ್ತು) ನಾಳೆ ಇಂದ ಇಬ್ಬರು ಸ್ವಿಮ್ಮಿಂಗ್ ಗೆ ಹೋಗೋಣ, 8 ಡೇಸ್ ಕಂಪನಿ ಕೊಡ್ತೀನಿ Next ನೀನು ಒಬ್ಬನೇ ಹೂಗಲು ಅಭ್ಯಾಸ ಮಾಡ್ಕೋ ಮಗ.. ಅದು ಅಲ್ಲದೆ ಡ್ರೈವಿಂಗ್ & ಸ್ವಿಮ್ಮಿಂಗ್ ಇವೆಲ್ಲ ಬೇಸಿಕ್ ಸರ್ವೈವಲ್ ಸ್ಕಿಲ್ಲ್ಸ್ (Basic survival skills) ಅಲ್ಲವಾ...? ಇನ್ನೇನೋ, ಲೈಫ್ ನಲ್ಲಿ ಇನ್ನು 2 ರಿಂದ 3 ವರ್ಷ ಅಷ್ಟೇ ಆಮೇಲೆ ಮದುವೆ ಆಗ್ತೀವಿ... ಅಮೇಲೆ ಫ್ಯಾಮಿಲಿ ಮ್ಯಾನ್ ಲೈಫ್. So ಈ 2 – 3 ವರ್ಷ ನಾದರು LETS LIVE FOR OURSELF ಮಗ.., LETS ENJOY, LETS HAVE SOME HEALTHY HABBITS...’ ಅಂತೆಲ್ಲ ಹೇಳಿ ಫುಲ್ ಜೋಶ್ ತರಿಸಿಬಿಟ್ಟ. ಟೈಮ್ 10.15 pm ಅಗೀತ್ತು. ಇಬ್ಬರು ಅಕ್ಷಯ ಭಂಡರ್ ನಲ್ಲಿರೋ ‘ಪಯೋನೀರ್’ ಸ್ಪೋರ್ಟ್ಸ್ ಅಂಗಡಿಗೆ ಹೋಗಿ ತಲಾ 150 ರೊಪಾಯಿಯಂತೆ 2 ಸ್ವಿಮ್ಮಿಂಗ್ Shorts ನ Purchase ಮಾಡಿದೆವು. ಮಾರನೆ ದಿನದಿಂದ ಶುರುವಾಗಿತ್ತು ನನ್ನ ಸ್ವಿಮ್ಮಿಂಗ್ ಪ್ರಾಕ್ಟೀಸ್. ಸುಮಾರು ದಿನದಿಂದ ನನ್ನ ಮನಸ್ಸಲ್ಲಿ ‘ನಾನು ಸ್ವಿಮ್ಮಿಂಗ್ ಸೇರಲು ಕಾರಣ ಏನು?...’ ಅಂತ ಮೂಡುತ್ತಿದ್ದ ಪ್ರಶ್ನೆಗೆ ಉತ್ತರ ಇವತ್ತು ಸಿಕ್ಕಿದಂತೆ ಆಯಿತು.

ಇದೆಲ್ಲ ಯೋಚನೆ ಮಾಡ್ತಾ ಹಾಗೆ ಸ್ವಿಮ್ಮಿಂಗ್ ಪೂಲ್ ನ ಒಂದು ಬದಿಯಲ್ಲಿನ ಸೆಂಟರ್ ನಲ್ಲಿ ಇದ್ದ ಒಂದು Exit ಸ್ಪೇಸ್ ಮೇಲೆ ತೂಗು ಹಾಕಿದ್ದ 'ಅಜಂತಾ' ಗಡಿಯಾರವನ್ನು ನೋಡಿದೆ. ಆದು 7.10 ತೋರಿಸ್ತಾ ಇತ್ತು. ಇನ್ನು 5 ನಿಮಿಷ ಇದೆ, ಲಾಸ್ಟ್ ಒಂದು Length ಮಾಡಿ ಹೊರಡೋಣ ಅಂತ ಅಂದುಕೊಂಡು, ಪುನಃ ನೀರಿನಲ್ಲಿ ಮುಳುಗಿ 12 ಫೀಟ್ ಕಡೆ ಸ್ವಿಮ್ ಮಾಡಲು ಶುರು ಮಾಡಿದೆ.

Saturday, June 5, 2010

ರಾಗಿ ತೂರುವ ಹಾಡಿನಿಂದ ತಾನ್ಸೇನ್ ನ ‘ದೀಪಕ್ ರಾಗ’ದವರೆಗೆ…

ಅವತ್ತು ನನ್ನ ಅತ್ತಿಗೆ ಮನೆಯವರು ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ನನ್ನ ಅಣ್ಣ ಶಶಿ ಕೂಡ ಏಪ್ರಿಲ್ ಮೊದಲನೆ ವಾರ ಬಾಂಬೆಯಿಂದ 4 ದಿನ ಮೈಸೂರಿನಲ್ಲಿ ಇದ್ದು ಹೋಗೋಣ ಅಂತ ಬಂದಿದ್ದ. ಅತ್ತಿಗೆ ತಂದೆ ‘ಪಾಪಣ್ಣ’ ಅಂಕಲ್ ನಮ್ಮ ಮೈಸೂರು ತಾಲ್ಲೋಕು ಪಂಚಾಯಿತಿ E O ಆಗಿದ್ದರೆ. ಅವರಿಗೆ ಬಿಡುವು ಸಿಗುವುದೇ ಅಪರೂಪ ಹಾಗೆ ಸಿಕ್ಕಿದಾಗ ನಮ್ಮ ಮನೆಗೆ ಬಂದು ಅಪ್ಪಾಜಿ ಮತ್ತೇ ಅಮ್ಮನನ್ನು ಮಾತನಾಡಿಸಿಕೊಂಡು ಹೋಗ್ತಾ ಇರ್ತಾರೆ. ಅವತ್ತು ಅಮ್ಮ ಹಾಗು ಅತ್ತಿಗೆ ಸೇರಿ ಮಟ್ಟನ್ ಫ್ರೈ & ಸಾಂಬಾರ್, ಚಿಕನ್ ಕಬಾಬ್, ಎಗ್ಗ್ ಫ್ರೈ, ಚಪಾತಿ, ಇನ್ನು ಏನೇನೋ ಮಾಡದಿದ್ದರೂ. ಎಲ್ಲರೂ ಊಟ ಮಾಡಿ ಆಯಿತು. ಯಾಕೋ ಈ 2010 ರ ಬೇಸಿಗೆಯ ದಗೆ ಸಿಕ್ಕಪಟ್ಟೆ ಇತ್ತು. ಮೈಸೂರಿನಲ್ಲಿ ಕೆಲವೊಂದು ದಿನ ತಾಪಮಾನ 38 ಡಿಗ್ರಿ ಗೆ ಏರಿತ್ತು!. ಮೈಸೂರ್ ನಲ್ಲೆ 38 ಡಿಗ್ರಿ ಅಂದ್ರೆ ಇನ್ನು ಬಳ್ಳಾರಿ, ಬೆಳಗಾಂನ ತಾಪಮಾನ ಉಹಿಸೂಕೆ ಆಗುತ್ತಾ??? ನಾವು 1st ಫ್ಲೂರ್ ನಲ್ಲಿ ಮನೆ ಕಟ್ಟುವಾಗ ಮಾಡಿದ್ದ ಒಂದು ಒಳ್ಳೆ ಕೆಲಸವೇನೆಂದರೆ ಮುಂದೆ Sit out / Balcony ಗೆ ಅಂತ 22 ಅಡಿ ಉದ್ದ ಹಾಗು 5 ಅಡಿ ಅಗಲ ಸ್ಪೇಸ್ ಅನ್ನು ಬಿಟ್ಟಿದ್ದು. ಸಂಜೆ ಹೊತ್ತು ಕೂತು ಮಾತನಾಡಲು, ಊಟ ಆದ ಮೇಲೆ ತಿರುಗಾಡಲು, ಎಲ್ಲದಕ್ಕೂ Perfect ಆಗಿತ್ತು. ಸರಿ ಅವತ್ತು ಊಟ ಆದ ಮೇಲೆ ಅತ್ತಿಗೆ ತಂದು ಚಾಪೆ ಹಾಸಿದರು. ಸಮಯ ರಾತ್ರಿ 9.40 ಆಗಿತ್ತು. ಪಾಪಣ್ಣ ಅಂಕಲ್ ಮತ್ತೆ ಚಂದ್ರ ಆಂಟಿ ಚಾಪೆ ಮೇಲೆ ಕೂತಿದ್ದರು. ನಾನು, ಶಶಿ, ಅತ್ತಿಗೆ, ಪುಟ್ಟು(ಅತ್ತಿಗೆ ತಂಗಿ) ನಾಲ್ಕು ಜನ ಶೂ ಬಾಕ್ಸ್ ಗೆ ಅಂತ ಮಾಡಿಸಿದ್ದ ಬಾಕ್ಸ್ ಮೇಲೆ ಕೂತಿದ್ದೆವು. ಅಮ್ಮ ಮತ್ತೇ ಅಪ್ಪಾಜಿ ಚೇರ್ ತಂದು ಅದರೆ ಮೇಲೆ ಕೂತಿದ್ದರು. ನನ್ನ ಶರ್ಟ್, ಬನಿಯನ್ ಎಲ್ಲಾ ಬೆವರಿಗೆ ಒದ್ದೆಯಾಗಿತ್ತು. ಏನ್ ಶೆಕೆ ತಡಿಯೋಕೆ ಆಗ್ತಾನೆ ಇರಲಿಲ್ಲ. ಪಾಪಣ್ಣ ಅಂಕಲ್ ಅಪ್ಪಾಜಿಗೆ ‘ಏನ್ ಸರ್ ಇದು? ಮೈಸೂರ್ ನಲ್ಲಿ ಈ ಮಟ್ಟ ಶೆಕೆ... ಏನ್ ಮನುಷ್ಯ ಬದುಕೋಕೆ ಆಗುತ್ತ ಸರ್?...’ ಅಂದರು. ಚಂದ್ರ ಆಂಟಿ ಇದ್ದು ‘ ಸುತ್ತಮುತ್ತ ಇರೋ ಮರಗಳ ಒಂದಾದ್ರೂ ಎಲೆ ಅಲ್ಲಾಡುತ್ತ ಇಲ್ಲವಲ್ರಿ ನೋಡಿ..’ ಅಂತ ಪಾಪಣ್ಣ ಅಂಕಲ್ ಗೆ ಹೇಳಿದರು. ನಮ್ಮ ಮನೆ ಮುಂದೆ ಒಂದು ಹೊಂಗೆ ಮರ ಹಾಗು ಒಂದು ಸಂಪಿಗೆ ಮರನ ಅಪ್ಪಾಜಿ ಸುಮಾರು 15 - 16 ವರ್ಷದ ಹಿಂದೆನೇ ತಂದು ನೆಟ್ಟಿದ್ದರು.

ಅಪ್ಪಾಜಿ ಚಂದ್ರ ಆಂಟಿ ಹಾಗು ಅಂಕಲ್ ಮಾತು ಕೇಳಿ ‘ ಸರ್ ಹಿಂದಿನ ಕಾಲದಲ್ಲಿ ರಾಗಿ ಹಾಗು ಬತ್ತನಾ ಗದ್ದೆ ಹಾಗು ರಸ್ತೆಗಳಲ್ಲಿ ತೋರುತಿದ್ದಾಗ ಒಂದು ಹಾಡು ಹೇಳ್ತಾ ಇದ್ದರು ನೆನಪಿದಿಯಾ ಸರ್?..’ ಅಂತ ಪಾಪಣ್ಣ ಅಂಕಲ್ ಗೆ ಕೇಳಿದರು. ಪಾಪಣ್ಣ ಅಂಕಲ್ ‘ಅದೇನೋ ಹೇಳ್ತಾರೆ ಸರ್… ಈಗ ನೆನಪಿಗೆ ಬರ್ತಾ ಇಲ್ಲ ’ಅಂದ್ರು. ಅದಕ್ಕೆ ಅಪ್ಪಾಜಿ ‘ ಸರ್ ಬತ್ತ ಹಾಗು ರಾಗಿನ ಗಾಳಿಗೆ ತುರುವಾಗ ಅವರು ತೂರೋ ದಿಕ್ಕಿನಲ್ಲೇ ಗಾಳಿ ಬರಲಿ ಅಂತ ಹೊಯಿಲ್ ಗೋ ವಾಸುದೇವ... ಹೊಯಿಲ್ ಗೋ... ಅಂತಾರೆ, ಕೆಲವು ಸಲ ಕಾಕತಾಳಿಯ ಅನ್ನುವಂತೆ ಅವರು ಆ ರೀತಿ ಹೇಳಿದ ತಕ್ಷಣ ಗಾಳಿನು ಬೀಸಿಬಿಡುತ್ತೆ… ಹಾಗೆ ಈಗ ನಾವು ಅ ಹಾಡು ಹೇಳಿ ಗಾಳಿ ಬರಿಸ್ಕೋಬೇಕು… ಥೂ… ಏನ್ ಶೆಕೆ ಅಪ್ಪ...’ ಅಂತ ನಿಟ್ಟುಸಿರು ಬಿಟ್ಟರು. ಯಾಕೋ ಶೆಕೆ ಹೆಚ್ಚಾದಂತೆ ಆಗೀ ನಾನು ನಾನ್ ರೂಮಿಗೆ ಹೋಗಿ ಫ್ಯಾನಿನ ಸ್ಪೀಡನ್ನು ೫ ಕ್ಕೆ ಏರಿಸಿ ಹಾಗೆ ಹಾಸಿಗೆ ಮೇಲೆ ಉರುಳಿಕೊಂಡೆನು. ಪಾಪಣ್ಣ ಅಂಕಲ್, ಚಂದ್ರ ಆಂಟಿ, ಪುಟ್ಟು ಎಲ್ಲರೂ ಲೇಟ್ ಅಯೀತು ಪುನಃ ಇನ್ನೊಮ್ಮೆ ಬರ್ತೀವಿ ಅಂತ ಹೇಳಿ ಹೊರಟರು.

ನನಗಂತು ಅಪ್ಪಾಜಿ ಹೇಳಿದ ‘ಹೊಯಿಲ್ ಗೋ ವಾಸುದೇವ…’ ಅನ್ನೋ ಒಂದು ಹಾಡಿನಿಂದ ಗಾಳಿಯನ್ನು (ಅದರೆ ದಿಕ್ಕು ಹಾಗು ವೇಗವನ್ನು) ಕಂಟ್ರೋಲ್ ಮಾಡೋದು ನಿಜನಾ?... ಈ ರೀತಿ ನೈಸರ್ಗಿಕ ಶಕ್ತಿಗಳನ್ನು ಮನುಷ್ಯ ಯಾವಾಗಲಾದರು ನಿಜವಾಗಿಯೂ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದನಾ?... ಇದು ಸಾಧ್ಯನಾ?... ಅಂತೆಲ್ಲ ಯೋಚಿಸಿದೆ. ಹಾಗೆ ಯಾವುದಾದ್ರು ವಿಷಯಗಳನ್ನು ಅದರಲ್ಲೂ ಮೂಢ ನಂಬಿಕೆ ಹಾಗು ವಿಜ್ಞಾನ ವಿಷಯಗಳಿಗೆ ತಾಳೆ ಹಾಕಿಕೊಂಡಿರು ಕುತೂಹಲಕಾರಿ ವಿಷಯಗಳನ್ನ ಕುರಿತು ಯೋಚಿಸುವಾಗ ನನ್ನ ಒಳಮನಸ್ಸು (ಸಬ್ ಕಾನ್ಷಿಯಸ್ ಮೈಂಡ್) ತಕ್ಷಣ Respond ಮಾಡುತ್ತೆ. ಈ ಬಾರಿ ಅದು ತಾನ್ ಸೇನ್ ನ ಹೆಸರನ್ನು ಸೂಚಿಸುವ ಮೂಲಕ Respond ಮಾಡಿತ್ತು. YES ಕರೆಕ್ಟ್!!!! ಮಹಾರಾಜ್ ಅಕ್ಬರ್ ಆಸ್ಥಾನದಲ್ಲಿದ್ದ ಪ್ರಖ್ಯಾತ ಗಾಯಕ ತಾನ್ಸೇನ್ ಹೀಗೆ ಪ್ರಕೃತಿಯ(ನೈಸರ್ಗಿಕ) ಶಕ್ತಿ ಗಳನ್ನೂ ತನ್ನ ಸಂಗೀತದ ಮೂಲಕ ನಿಯಂತ್ರಿಸುತಿದ್ದನಂತೆ!. ತಾನ್ಸೇನ್ ತನ್ನ ಸಂಗೀತದಿಂದ ಹಾಗು ರಾಗಗಳಿಂದ ಅದ್ಬುತಗಳನ್ನು ಸೃಷ್ಟಿಸುತಿದ್ದನಂತೆ. ತಾನ್ಸೇನ್ ಅವನು ಹಾಡುತಿದ್ದ ವಿಶಿಷ್ಟ ರಾಗದಿಂದ ಚಿತ್ರ ಬಿಡಿಸುತಿದ್ದ, ಮಳೆ ಬರಿಸುತಿದ್ದ ಅಷ್ಟೆ ಅಲ್ಲದೆ ‘ದೀಪಕ ರಾಗ’ ಹಾಡಿ ಖಾಲಿ ಶೂನ್ಯದಿಂದ ಬೆಂಕಿ ಹತ್ತಿಸಿ, ದೀಪಗಳು ಉರಿಯುವಂತೆ ಮಾಡುತಿದ್ದನಂತೆ. ನಾನು ಟೈಮ್ ನೋಡಿದೆ 10.25 Pm ಅಗಿತ್ತು. ಏನ್ ಇಷ್ಟು ಬೇಗ ಮಲಗೋದು? ಅಂತ ಯೋಚಿಸಿ ಎದ್ದು ಕಂಪ್ಯೂಟರ್ ಆನ್ ಮಾಡಿ ಇಂಟರ್ನೆಟಗೆ ಕನೆಕ್ಟ್ ಆದೆ. ಅಡ್ರೆಸ್ ಬಾರ್ ನಲ್ಲಿ ಗೂಗಲ್ ಅಂತ ಟೈಪ್ ಮಾಡಿ, ಗೂಗಲ್ ನ ಸೈಟ್ ನಲ್ಲಿ ತಾನ್ಸೇನ್ ಮತ್ತು ಅವನ ಸಂಗೀತದ ಬಗ್ಗೆ ಗೂಗಲ್ ಮಾಡಿದೆ. ಮುಂದಿನ 1 ಗಂಟೆ ಕ್ರಿ.ಷ. 1525 ಕ್ಕೆ ಹೋಗಿ ತಾನ್ಸೇನ್ ಬಗ್ಗೆ ಇಂಟರ್ನೆಟ್ನಲ್ಲಿ ಲಭ್ಯವಿದ್ದ ಎಲ್ಲಾ ಮಾಹಿತಿ ಜಾಲಾಡಿ ವಾಪಸು ಬಂದೆ.

ತಾನ್ಸೇನ್ ಸಾಕಷ್ಟು ಜನ ತಿಳಿದಿರುವ ಹಾಗೆ ಅವನ ಮೂಲ ಮತ ಇಸ್ಲಾಂ ಅಲ್ಲ. ತಾನ್ಸೇನ್ ಒಬ್ಬ ಬ್ರಾಹ್ಮಣ. ಅವನು ಹುಟ್ಟಿದ್ದು ಕ್ರಿ.ಷ.1492ರಲ್ಲಿ ಅಂತ ಕೆಲವೊಂದು ದಾಖಲೆಗಳು ತಿಳಿಸಿದರೆ ಮತ್ತೆ ಕೆಲವು ಕ್ರಿ.ಷ. 1506 ಅಂತ ತಿಳಿಸುತ್ತವೆ. ತಾನ್ಸೇನ್ ನ ಹುಟ್ಟಿದ ವರ್ಷದ ಬಗ್ಗೆ ಇನ್ನು ಗೊಂದಲವಿದೆ. ಗ್ವಾಲಿಯರ್ ಹತ್ತಿರವಿರುವ ‘ಬೆಹತ್’ ಎಂಬ ಗ್ರಾಮದಲ್ಲಿ ವಾಸವಿದ್ದ ಮಕರಂದ ಪಾಂಡೆ ದಂಪತಿಗಳಿಗೆ ಹಲವು ವರ್ಷ ಮಕ್ಕಳಿರಲಿಲ್ಲವಂತೆ. ಒಂದು ದಿನ ಆ ದಂಪತಿಗಳು ಆ ಊರಿನಲ್ಲಿ ಬೀಡು ಬಿಟ್ಟಿದ್ದ ಸಂತ ಪೀರ್ ಮೊಹಮ್ಮೆದ್ ಘಾಸ್ ಹತ್ತಿರ ಹೋಗಿ ಬೇಡಿಕೊಂಡಾಗ, ಅವನು ಅವರಿಬ್ಬರಿಗೆ ಆಶಿರ್ವದಿಸಿ ಮಕರಂದ ಪಾಂಡೆಯ ಬಲಗೈಗೆ ಒಂದು ದಾರ ಕಟ್ಟಿದನಂತೆ. ಆ ಘಟನೆ ನೆಡೆದ ಕೆಲವೇ ದಿನದಲ್ಲಿ ಮಕರಂದ ಪಾಂಡೆ ಮಡದಿಯು ಒಂದು ಗಂಡುಮಗುವಿಗೆ ಜನ್ಮ ಕೊಟ್ಟಳು. ಮಕರಂದ ಪಾಂಡೆಯು ಆ ಮಗುವಿಗೆ ‘ರಾಮ್ ತನು’ ಎಂದು ಹೆಸರಿಟ್ಟನು. ಈ ರಾಮ್ ತನುನೇ ಮುಂದೆ ಭಾರತದ ಅತ್ಯಂತ ಪ್ರಖ್ಯಾತ ಸಂಗೀತಗಾರ ‘ತಾನ್ಸೇನ್’ ಆಗಿ ಬೆಳೆದ. ತಾನ್ಸೇನ್ ನನ್ನು ಅವನ ತಂದೆ ತಾಯಿ ಪ್ರೀತಿಯಿಂದ ‘ತನ’ ಮತ್ತು ‘ಮುಕುಲ್’ ಅಂತ ಕರೆಯುತಿದ್ದರಂತೆ. ತಾನ್ಸೇನ್ ನಿಗೆ ಬಾಲ್ಯದಲ್ಲಿ ಕಾಡಿಗೆ ಹೋಗಿ ಪ್ರಾಣಿ ಪಕ್ಷಿಗಳ ಧ್ವನಿಯನ್ನು ಅನುಕರಣೆ ಮಾಡುವುದು ಅಭ್ಯಾಸವಾಗಿತ್ತು. ಅವನು ಪ್ರಕೃತಿಯಲ್ಲಿ ಕೇಳಿಬರುವ ಎಲ್ಲ ಶಬ್ದಗಳನ್ನು ಅನುಕರಣೆ ಮಾಡಲು ಪ್ರಯತ್ನಿಸುತಿದ್ದನಂತೆ. ಒಮ್ಮೆ ತಾನ್ಸೇನನು ಕಾಡಿನಲ್ಲಿ ಪಕ್ಷಿ ಗಳ ಕಲರವ ಕೇಳುತಿದ್ದಾಗ ಯಾವೂದೊ ಒಂದು ಪಕ್ಷಿಯು ವಿಚಿತ್ರವಾಗಿ ಒಂದು ಇಂಪಾದ ರಾಗ ಹೊರಡಿಸಿದಾಗ ಅಲ್ಲೇ ಇದ್ದ ಒಂದು ಚಿಕ್ಕ ಒಣಗಿದ ಗಿಡದ ಬಳ್ಳಿಯು ಬೆಂಕಿ ಹತ್ತಿಕೊಂಡಿತಂತೆ!. ಈ ಘಟನೆಯೇ ಅವನು ಮುಂದೆ ದೀಪಕ್ ರಾಗ ಕಂಡುಹಿಡಿಯಲು ಪ್ರೇರಣೆಯಾಯಿತು ಅಂತ ಒಂದು ಕತೆ ಹೇಳುತ್ತದೆ. ಒಮ್ಮೆ ಅವನು ಕಾಡಿನ ದಾರಿಯಲ್ಲಿ ಹುಲಿಯ ಧ್ವನಿಯನ್ನು ಅನುಕರಣೆ ಮಾಡುತಿದ್ದಾಗ ಅದನ್ನು ಕೇಳಿದ ಹರಿದಾಸ್ ಎಂಬ ಸಂಗೀತದ ಗುರು ಇವನ ಪ್ರತಿಭೆಯನ್ನು ಮೆಚ್ಚಿ, ಅವನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸಿ,ತಮ್ಮ ಎಲ್ಲ ಸಂಗೀತದ ವಿದ್ಯೆಯನ್ನು ಅವನಿಗೆ ಧಾರೆ ಎರೆಯಲು ನಿರ್ಧರಿಸಿದರು. ಅವರಿಂದ ಸಾಕಷ್ಟು ವಿದ್ಯಾ ಕಲಿತ ಮೇಲೆ ತಾನ್ಸೇನ್ ಅವರ ತಂದೆಗೆ ಹುಷಾರಿಲ್ಲದ ಕಾರಣ ಅವರಲ್ಲಿಗೆ ಹಿಂದಿರುಗಿದ. ಪುನ ಕೆಲ ಕಾಲ ಬಿಟ್ಟು ಅವರ ತಂದೆಯ ಮಾತಿನಂತೆ ಮೊಹಮ್ಮೆದ್ ಘಾಸ್ ಎಂಬುವರ ಹತ್ತಿರ ಸಂಗೀತ ಅಭ್ಯಾಸ ಮಾಡಲು ಸೇರಿದನು. ಅಲ್ಲಿ ಸಂಗೀತ ಕ್ಷೇತ್ರದಲ್ಲಿ ಉನ್ನತವಾಗಿ ಪರಿಣಿತಿ ಪಡೆದು ಗ್ವಾಲಿಯರ್ ರಾಜನ ಆಸ್ತಾನದಲ್ಲಿ ಗಾಯಕನಾಗಿ ಸೇರಿದ. ಅಲ್ಲಿ ಆಸ್ತಾನದಲ್ಲಿ ಸೇವಕಿಯಗಿದ್ದ ‘ಹುಸನಿ’ ಎಂಬವಳನ್ನು ಮದುವೆಯಾದ ಅಂತ ಹಲವು ಪುಸ್ತಕಗಳು ತಿಳಿಸುತ್ತವೆ. ತಾನ್ಸೇನ್ ನ ಖ್ಯಾತಿ ದಿನದಿಂದ ಬೆಳದಂತೆ. ಅಕ್ಬರ್ ಮಹಾರಾಜನು ಆ ಗ್ವಾಲಿಯರ್ ರಾಜನಿಗೆ ತಾನ್ಸೇನ್ ನನ್ನು ತನ್ನ ಆಸ್ತಾನಕ್ಕೆ ಕಳುಹಿಸಲು ಆದೇಶಿಸಿದ.

ಅಕ್ಬರನ ಆಸ್ತಾನದಲ್ಲಿ ತಾನ್ಸೇನ್ ನು ತುಂಬಾ ಬೇಗ ಪ್ರಸಿದ್ದಿಯಾದ. ಅಲ್ಲಿಯ ಜನರಿಗೆ ಅವನು ಸಂಗೀತದ ಮಾಂತ್ರಿಕ ಎಂದು ಅರಿವಾಯಿತು. ತಾನ್ಸೇನ್ ನು ಸಂಗೀತ ಲೋಕದಲ್ಲಿರುವ ಎಲ್ಲ ರಾಗಗಳ ಮೇಲೆ ನಿಯಂತ್ರಣ ಹೊಂದಿದ್ದಾನೆ ಮತ್ತು ಅವುಗಳನ್ನು ಹಾಡುವ ಮೂಲಕ ಅದ್ಬುತ ಹಾಗು ವಿಸ್ಮಯ ಗಳನ್ನೂ ಸೃಷ್ಟಿಸುತಾನೇ ಎಂದೆಲ್ಲ ಜನ ಹೇಳುತ್ತ ಇದ್ದರು. ಅಕ್ಬರನ ಆಸ್ತಾನದಲ್ಲಿ ತಾನ್ಸೇನ್ ನು ದಿನಾಲೂ ಅಕ್ಬರ್ ಮಹಾರಾಜನಿಗೆ ರಾತ್ರಿ ವೇಳೆ ನಿದ್ದೆ ಮಾಡಲು ಹಾಗು ಬೆಳಗಿನ ಜಾವದಲ್ಲಿ ಎದ್ದೇಳಲು ಸಹಾಯವಾಗುವಂತೆ ಇಂಪಾದ ರಾಗಗಳನ್ನು ಹಾಡುತ್ತಿದ್ದನು ಅಂತ ಹೇಳಲಾಗಿದೆ. ತಾನ್ಸೇನ್ ನು ಭಾರತದ ಶಾಸ್ತ್ರಿಯ ಸಂಗೀತದ ರಾಗವನ್ನು ಅರೇಬಿಕ್ ಹಾಗು ಪೆರ್ಸಿಯ ರಾಗಗಳೊಂದಿಗೆ ಸೇರಿಸಿ ಹೊಸದಾದ ರಾಗಗಳನ್ನೂ ಸೃಷ್ಟಿಸುತ್ತಿದ್ದ. ಒಮ್ಮೆ ಅಕ್ಬರನ ಸೈನಿಕರು ಕಾಡಿನಲ್ಲಿ ಒಂದು ಕಾಡಾನೆಯನ್ನು ಹಿಡಿದುಕೊಂಡು ಬಂದು, ಅದನ್ನು ಪಳಗಿಸುವಲ್ಲಿ ವಿಫಲರಾಗಿ ನಂತರ ಆ ಕಾಡಾನೆಯು ಅರಮನೆ ಆವರಣದಲ್ಲಿ ಸಿಕ್ಕ ಸಿಕಲ್ಲಿ ನುಗ್ಗಿ ಇನ್ನೇನು ಸಾಕಷ್ಟು ಹಾನಿ ಮಾಡಬೇಕು ಅನ್ನುವಷ್ಟರಲ್ಲಿ ತಾನ್ಸೇನ್ ನು ತನ್ನ ಒಂದು ವಿಶಿಷ್ಟ ರಾಗದಿಂದ ಆನೆಗೆ ಮೋಡಿ ಮಾಡಿ ಅದನ್ನು ಪಳಗಿಸಿ ನಿಯಂತ್ರಣಕ್ಕೆ ಬರುವಂತೆ ಮಾಡಿದನು. ಅಷ್ಟೇ ಅಲ್ಲದೆ ‘ಸಂಧ್ಯಾ ರಾಗ’ ಎಂಬ ರಾಗವನ್ನು ತಾನ್ಸೇನ್ ನು ಬೆಳಗಿನ ಅಥವಾ ಮಧ್ಯಾನದ ಹೊತ್ತು ಹಾಡುತ್ತಿದ್ದರೆ, ಸೂರ್ಯನ ಕಿರಣಗಳು ಮಂಕಾಗಿ, ಅವನು ಹಾಡುತಿದ್ದ ಸುತ್ತ ಮುತ್ತ ವಾತವರಣದಲ್ಲಿ ಸಂಜೆಯಾಗಿದೆ ಏನೋ ಎಂಬಂತೆ ಬಾಸವಾಗುತ್ತಿತಂತೆ!. ತಾನ್ಸೇನ್ ನು ಅಕ್ಬರನ ಆಸ್ತಾನದಲ್ಲಿ ಬರೀ ಗಾಯಕನಲ್ಲದೆ ಆ ಕಾಲದಲ್ಲಿ ಅವನ(ಅಕ್ಬರನ) ಆಸ್ತಾನದಲ್ಲಿ ವಿವಿಧ ಕ್ಷೇತ್ರದಲ್ಲಿ ಅಪಾರ ಪರಿಣಿತಿ ಹೊಂದಿದ ೯ ಜನರಲ್ಲಿ ಅಂದ್ರೆ ನವರತ್ನಗಳು ಎಂದು ಕರೆಯುತಿದ್ದವರಲ್ಲಿ ಪ್ರಮುಖನಾಗಿದ್ದ.[ ಅಕ್ಬರನ ಆಸ್ತಾನದಲ್ಲಿದ್ದ ನವರತ್ನಗಳು ಎಂದು ಹೆಸರಾಗಿದ್ದವರು ಯಾರು ಯಾರೆಂದರೆ... 1) ಅಬುಲ್ ಫಾಜ್ಲ್ – ‘ಅಕ್ಬರ್ ನಾಮ’ ಕೃತಿಯ ಲೇಖಕ. ಇವನು ಅಕ್ಬರ್ ನ ಆಸ್ತಾನದಲ್ಲಿ ಆಡಳಿತಕಾರಿಯಗಿದ್ದ. 2) ಫೈಜಿ - ಅಬುಲ್ ಫಾಜ್ಲ್ ನ ತಮ್ಮ. ಅಕ್ಬರ್ ಮಗನ ಗುರು ಹಾಗು ಒಳ್ಳೆ ಕವಿ. 3) ತಾನ್ಸೇನ್ 4) ಬೀರ್ ಬಲ್ – ಬೀರ್ ಬಲ್ ನ ಬಗ್ಗೆ ಕೇಳದವರಿಲ್ಲ ಬಿಡಿ. ಆದರು ಬೀರ್ ಬಲ್ ‘ಬ್ರಹ್ಮ’ ಎಂಬ ಕಾವ್ಯನಾಮದೊಂದಿಗೆ ಅನೇಕ ಕವಿತೆ ರಚಿಸಿರುವುದು ಅನೇಕ ಜನರಿಗೆ ಗೊತಿಲ್ಲದ ವಿಷಯವಾಗಿದೆ. ಅವುಗಳು ಈಗಲೂ ಭರತ್ ಪುರ್ ನ ವಸ್ತುಸಂಗ್ರಹಾಲಯದಲ್ಲಿದೆ. ಬೀರ್ ಬಲ್ ನ್ನು ಅಫ್ಘಾನಿ ಬುಡ ಕಟ್ಟು ಸೈನ್ಯದೊಂದಿಗಿನ ಯುದ್ದದಲ್ಲಿ ಮರಣಿಸಿದನು. 5) ರಾಜ ತೊದರ್ ಮಲ್ – ಅಕ್ಬರ್ ನ ವಿತ್ತ ಮಂತ್ರಿ 6) ರಾಜ ಮಾನ್ ಸಿಂಗ್ – ಅಂಬರ್ ಸಂಸ್ಥಾನದ ರಜಪುತ್ ರಾಜ 7) ಅಬ್ದುಲ್ ರಹಿಮ್ ಖಾನ್ – ಅಕ್ಬರ್ ಆಸ್ತಾನದ ಕವಿ 8) ಫಾಗಿರ್ ಅಜಿಯಾ ದಿನ್ 9) ಮುಲನ್ ದೋ ಪೈಝಾ, ಇವರಿಬ್ಬರು ಅಕ್ಬರ್ ನ ಆಪ್ತ ಸಲಹಗಾರರಾಗಿದ್ದರಂತೆ]

ಅಕ್ಬರನು ತಾನ್ಸೇನ್ ಗೆ ಪ್ರೀತಿಯಿಂದ ‘ ಮಿಯನ್ ’ ಎಂಬ ಬಿರುದು ಕೊಟ್ಟಿದ. ಎಲ್ಲರೂ ತಾನ್ಸೇನ್ ನನ್ನು ‘ ‘ಮಿಯನ್ ತಾನ್ಸೇನ್’ ’ಎಂದೆ ಕೂಗತೊಡಗಿದ್ದರು. ‘ಮಿಯನ್’ ಎಂದರೆ ಕಲಿತಿರುವ ಮನಷ್ಯ ಎಂದರ್ಥವಂತೆ. ಅಕ್ಬರ್ ನೊಂದಿಗೆ ತಾನ್ಸೇನ್ ನ ಈ ಆತ್ಮಿಯ ಒಡನಾಟ ಅನೇಕ ಜನರಿಗೆ ಹಿಡಿಸಲಿಲ್ಲ. ಅನೇಕರು ಅಸೂಯೆ ಪಟ್ಟರು. ಹೇಗಾದರೂ ಮಾಡಿ ಅವನನ್ನು ಒಂದು ಬಾರಿ ಯಾವುದಾದರು ಸವಾಲಿನಲ್ಲಿ ಸೋಲಿಸಿ ಅಥವಾ ಇಕ್ಕಟ್ಟಿನಲ್ಲಿ ಸಿಕ್ಕಿಸಿ ಅಕ್ಬರ್ ರಾಜನಿಂದ ದೂರ ಮಾಡಬೇಕು ಎಂದು ಅವನ ವೈರಿಗಳು ಹೊಂಚು ಹಾಕಿ, ಅಕ್ಬರ್ ರಾಜನ ಬಳಿಗೆ ಹೋಗಿ ತಾನ್ಸೇನ್ ನು ಈಗ ಹೊಸ ರಾಗ ಕಲಿತಿದ್ದು, ಆ ರಾಗ ಹಾಡಿದರೆ ದೀಪಗಳು ತಾವಾಗಿಯೇ ಹತ್ತಿಕೊಳ್ಳುತ್ತವೆಯಂತೆ ಎಂದು ಹೇಳಿದರು. ಅಕ್ಬರನಿಗೆ ಆಶ್ಚರ್ಯವಾಗಿ ತಾನ್ಸೇನ್ ನನ್ನು ಕರೆಸಿ ಈ ಬಗ್ಗೆ ವಿಚಾರಿಸಲಾಗಿ ತಾನ್ಸೇನ್ ನು ಹೌದು ಆ ರೀತಿಯ ಒಂದು ರಾಗವಿದ್ದು ಅದಕ್ಕೆ ‘ದೀಪಕ್ ರಾಗ’ ಎಂದು ಹೆಸರು, ಅದನ್ನು ಹಾಡಿದರೆ ಸುತ್ತ ಮುತ್ತಲಿನ ವಾತವರಣವು ಬಿಸಿಯಾಗಿ ದೀಪಗಳಿದ್ದರೆ ಹತ್ತಿಕೊಳ್ಳುತವೆ. ಆದರೆ ಆ ರಾಗ ಹಾಡಿದರೆ ನನ್ನ ದೇಹದಲ್ಲಿ ಉಷ್ಣ ಹೆಚ್ಚಾಗಿ ನನ್ನ ದೇಹವೇ ಉರಿದು ಹೋಗುವ ಸಾಧ್ಯತೆ ಹೆಚ್ಚು, ಹಾಗಾಗಿ ನಾನು ‘ದೀಪಕ್ ರಾಗ’ವನ್ನು ಹಾಡುವುದಿಲ್ಲ ಎಂದು ತಿಳಿಸಿದನು. ಆದರೆ ರಾಜ ಅಕ್ಬರನು ನೀನು ದೀಪಕ್ ರಾಗವನ್ನು ಹಾಡಲೇಬೇಕು ಅಂತ ಒತ್ತಾಯ ಮಾಡಿದಾಗ ತಾನ್ಸೇನ್ ನು 15 ದಿನಗಳ ಕಾಲಾವಕಾಶವನ್ನು ಕೇಳಿಕೊಂಡನು. ತಾನ್ಸೇನ್ ನು ದೀಪಕ್ ರಾಗ ಹಾಡಿ ಮುಗಿಸಿದ ಕೂಡಲೆ ಅವನ ದೇಹದ ತಾಪಮಾನ ಜಾಸ್ತಿ ಆಗಿ ತಾನು ಉರಿದು ಹೋಗುವ ಮುನ್ನ ಯಾರಾದರು ಮಳೆ ಬರಿಸುವಂತಹ ‘ ಮೇಘ ಮಲ್ಹರ್’ ಎಂಬ ರಾಗವನ್ನು ಹಾಡಬೇಕು. ಅದನ್ನು ಹಾಡಿದರೆ ವಾತಾವರಣ ತಂಪಾಗಿ ತಾನ್ಸೇನ್ ನ ಜೀವ ಉಳಿಯಬಹುದು. ಹಾಗಾಗಿ ತಾನ್ಸೇನ್ ನು ಆ ರಾಗವನ್ನು ತನ್ನ ಮಗಳಿಗೆ(ಕೆಲವರ ಪ್ರಕಾರ ಅವನ ಪತ್ನಿಗೆ) ಈ ‘ ಮೇಘ ಮಲ್ಹರ್’ ರಾಗ ಹೇಳಿಕೊಡುತ್ತಾನೆ. 15 ದಿನ ಕಳೆದು ರಾಜ ಅಕ್ಬರ್ ನ ಆಸ್ತಾನದಲ್ಲಿ ತಾನ್ಸೇನ್ ನು ‘ದೀಪಕ್ ರಾಗ’ ಹಾಡಲು ಎಲ್ಲ ಸಿದ್ಧತೆ ಮಾಡಿಕೊಂಡು ಹಾಡಲು ಶುರುಮಾಡಿದನು. ಅರಮನೆಯಲಿದ್ದ ಗಿಡ ಮರಗಳ ಎಲೆ ಎಲ್ಲ ಒಣಗಿ ಉದುರಿದವು, ಅರಮನೆ ಕೊಳದಲಿದ್ದ ನೀರು ಬೆಚ್ಚಗಾಗಿ ಕುದಿಯತೊಡಗಿತು, ಸುತ್ತ ಮುತ್ತಲಿದ್ದ ಹಕಿಗಳು ಹಾರಡ ತೊಡಗಿದವು ಇಡೀ ವಾತವರಣವು ಬಿಸಿಯಾಗಿ ಆಸ್ತಾನದ ಸುತ್ತ ಎಣ್ಣೆ ತುಂಬಿಸಿ ಇಟ್ಟಿದ್ದ ದೀಪಗಳೆಲ್ಲಾ ಒಮ್ಮೆಲೇ ‘ದಿಗ್’ ಎಂದು ಹತ್ತಿಕೊಂಡವಂತೆ!!!.

ತಾನ್ಸೇನ್ ನು ಕೂಡಲೇ ಹಾಡುವುದನ್ನು ನಿಲ್ಲಿಸಿ, ಆಸ್ತಾನದಿಂದ ಹಾಗು ಅರಮನೆಯ ಹೊರಗೆ ಓಡಿ ಊರ ಮಧ್ಯದಲ್ಲಿದ್ದ ಬಯಲಿನಲ್ಲಿ ನಿಂತನು. ಅಷ್ಟರಲ್ಲಾಗಲೇ ಅವನು ಹೇಳಿಕೊಟ್ಟ ‘ ಮೇಘ ಮಲ್ಹರ್’ ರಾಗವನ್ನು ಅವನ ಮಗಳು ಹಾಡಲಾರಂಭಿಸಿದ್ದಳಂತೆ. ಕೆಲ ಹೊತ್ತಿನಲ್ಲೇ ಜೋರಾಗಿ ಮಳೆಯಾಗಿ, ಇಡೀ ವಾತಾವರಣ ತಂಪಾಗಿ ತಾನ್ಸೇನ್ ನ ದೇಹದ ಉಷ್ಣವೂ ಕಡಿಮೆಯಾಗಿ ಅವನ ಜೀವ ಉಳಿದುಕೊಂಡಿತು.

ಈ ಕಥೆಯನ್ನು ಗುಜರಾತ್ ಕಡೆಯ ಜನಗಳು ಇನ್ನೊಂದು ರೀತಿ ಹೇಳುತ್ತಾರೆ. ತಾನ್ಸೇನ್ ನು ಆ ರೀತಿ ‘ದೀಪಕ್ ರಾಗ’ ಹಾಡಿ ದೀಪಗಳನ್ನು ಹತ್ತಿಸಿದ ಮೇಲೆ ದೇಹದ ಉಷ್ಣ ಜಾಸ್ತಿಯಾಗಿ ಅಕ್ಬರ್ ನ ಆಸ್ತಾನ ಬಿಟ್ಟು ಊರೂರು ಅಲೆಯುತ್ತ ‘ವದ್ ನಗರ’ಕ್ಕೆ ಬಂದನಂತೆ. ಅಲ್ಲಿ ‘ತನ’ ಮತ್ತು ‘ರಿರಿ’ ಎಂಬ ಇಬ್ಬರು ಚಿಕ್ಕ ಹುಡುಗಿಯರು ಇದ್ದರು.ಅವರು ಆ ಚಿಕ್ಕ ವಯಸ್ಸಿಗೆ ತುಂಬಾ ಚೆನ್ನಾಗಿ ಸಂಗೀತ ಕಲಿತಿದ್ದರಂತೆ. ಆ ಹುಡುಗಿಯರಿಗೆ ತಾನ್ಸೇನ್ ಎಂಬ ಮಹಾ ಸಂಗೀತಗಾರ ಈ ರೀತಿ ನರಳುತ್ತ ತಮ್ಮ ಊರಿಗೆ ಬಂದಿರುವ ವಿಷಯ ಗೊತ್ತಾಗಿ ಅವನ ಬಳಿ ಹೋಗಿ ‘ ಮೇಘ ಮಲ್ಹರ್’ ರಾಗ ಹಾಡಿ ಅವನ ವ್ಯಾಧೆಯನ್ನು ದೂರ ಮಾಡಿ ಅವನ ಜೀವ ಉಳಿಸಿದರಂತೆ. ಈ ವಿಷಯ ಅಕ್ಬರ್ ನ ಕಿವಿಗೆ ಬಿದ್ದು ಅವನು ಆ ಇಬ್ಬರು ಹುಡುಗಿಯರನ್ನು ತನ್ನ ಆಸ್ತಾನಕ್ಕೆ ಕರೆಸಲು ಅಪ್ಪಣೆ ಮಾಡಿ, ಆ ಹುಡುಗಿಯರು ಬರಲು ಒಪ್ಪದಿದ್ದಾಗ ಸೈನಿಕರನ್ನು ಕಳುಹಿಸಿ ಬಲವಂತವಾಗಿ ಕರೆತರಲು ನಿರ್ಧರಿಸಿದನು. ಈ ವಿಷಯ ‘ತನ’ ಮತ್ತು ‘ರಿರಿ’ ಗೆ ಗೊತ್ತಾಗಿ ‘‘ತಾವು ಹಾಡುವುದೇನಿದ್ದರು ಅದು ದೇವರಿಗೆ ಮಾತ್ರ, ಡೆಲ್ಲಿ ಸುಲ್ತಾನರಿಗೆ ಅಲ್ಲ!’’ ಅಂತೆ ಹೇಳಿ ಇಬ್ಬರು ಆ ಊರಿನ ಮಧ್ಯದಲ್ಲಿ ಇದ್ದ ಬಾವಿಗೆ ಹಾರಿ ಪ್ರಾಣ ತ್ಯಜಿಸಿದರಂತೆ. ಅ ಊರಿನವರು ಅ ಬಾವಿ ಸುತ್ತ ಸುಂದರ ಉದ್ಯಾನವನವನ್ನು ಕಟ್ಟಿದ್ದಾರೆ. ಅಹಮದಾಬಾದ್ ನಿಂದ 60 Kms ದೊರದಲ್ಲಿರು ಈ ‘ವದ್ ನಗರ’ದಲ್ಲಿರೋ ಆ ಬಾವಿ ಇವತ್ತಿಗೂ ಒಂದು ಪ್ರೇಕ್ಷಣಿಯ ಸ್ಥಳವಾಗಿದೆ. ಗುಜರಾತಿನ ಮುಖ್ಯ ಮಂತ್ರಿ ನರೇಂದ್ರ ಮೋದಿ ಯವರು ಆ ‘ವದ್ ನಗರ’ ಊರಿನವರೇ. ತಾನ್ಸೇನ್ ಬಗ್ಗೆ ಅನೇಕ ಚಲನ ಚಿತ್ರ ಗಳು ಬಂದಿವೆ. 1943 ರಲ್ಲಿ ಜಯಂತ ದೇಸಾಯಿ ನಿರ್ದೆಶಿಸಿದ್ದ ‘’ತಾನ್ಸೇನ್’’ ಚಿತ್ರಕ್ಕೆ ಕೇಂ ಚಂದ್ ಪ್ರಕಾಶ್ ಅದ್ಬುತ ಸಂಗೀತ ನೀಡಿದ್ದರಂತೆ. ಆ ಚಿತ್ರದ ಒಂದು ಹಾಡದ ‘ ಜಗ ಮಗ್ ಜಗ ಮಗ್ ದಿಯಾ ಜಲವೋ…’ ಎಂಬ ಹಾಡಿನಲ್ಲಿ ‘ದೀಪಕ್ ರಾಗ’ ಅಳವಡಿಸಲಾಗಿದೆಯಂತೆ. ತಕ್ಷಣ ಆ ಹಾಡನ್ನು ಇಂಟರ್ನೆಟ್ನಲ್ಲಿ ಡೌನ್ಲೋಡ್ ಮಾಡಿ ಕೇಳಿದೆ. 2-3 ಬಾರಿ ಕೇಳಿದಾಗ ಮೇಲೆ ಹಾಡೇನೋ ಇಷ್ಟವಾಯಿತು ಆದರೆ ಬೇಸಿಗೆ ಶೆಕೆಯ ಕಾರಣ ಬಂದ ಬೆವರು ಬಿಟ್ಟರೆ, ನನಗೆ ವಾತಾವರಣ ಬಿಸಿಯಾದ ಯಾವ ಅನುಭವ ಬರಲಿಲ್ಲ!. ತಾನ್ಸೇನ್ ನು ದುರ್ಬರಿ ಕನಡ, ಮಿಯನ್ ಕಿ ತೋಡಿ, ಮಿಯನ್ ಕಿ ಮಲ್ಹರ್, ಮಿಯ ಕಿ ಸಾರಂಗ್ ಅನ್ನೋ ರಾಗ ರಚಿಸಿದ್ದಾನೆ. ಪ್ರಖ್ಯಾತ ದ್ರುಪದ ಶೈಲಿಯಲ್ಲಿ ಹಾಡುವುದನ್ನು ಮೊದಲಿಗೆ ಶುರು ಮಾಡಿದ್ದೂ ತಾನ್ಸೇನ್ ನನೆ ಅನ್ನುತ್ತಾರೆ. ತಾನ್ಸೇನ್ ನು 1589 ರಲ್ಲಿ ಮರಣ ಹೊಂದಿದ ನಂತರ ಅವನನ್ನು ಗ್ವಾಲಿಯರ್ ನಲ್ಲಿರುವ ಅವನ 2ನೇ ಗುರು ಮೊಹಮ್ಮೆದ್ ಘಾಸ್ ನ ಸಮಾಧಿ ಹತ್ತಿರ ಮಣ್ಣು ಮಾಡಿದರಂತೆ. ತಾನ್ಸೇನ್ ನ ಮರಣದ ಸಮಯದಲ್ಲಿ ಅಕ್ಬರ್ ಅವನ ಪಕ್ಕದಲ್ಲಿದನಂತೆ.


ತಾನ್ಸೇನ್ ನ ಸಮಾದಿ ಪಕ್ಕ ಒಂದು ಹುಣಸೇ ಮರ ಇದೆ. ಆ ಮರದ ಎಲೆಯನ್ನು ಜಿಗಿದರೆ ಯಾರಾದರು ಸರಿ, ಅವರ ಧ್ವನಿ ಸುಧಾರಿಸುವುದು ಅಂತ ಇವತ್ತಿಗೂ ಜನ ನಂಬುತ್ತಾರೆ. ಪ್ರತಿವರ್ಷ ಡಿಸೆಂಬರ್ ನಲ್ಲಿ ಗ್ವಾಲಿಯರ್ ನಲ್ಲಿ ಒಂದು ವಾರ್ಷಿಕ ಸಂಗೀತೋತ್ಸವ ವನ್ನು ತಾನ್ಸೇನ್ ನ ನೆನಪಿಗೋಸ್ಕರ ನಡೆಸುತ್ತಾರೆ. ಏನೇ ಹೇಳಿ ನಮ್ಮ ಭಾರತದಲ್ಲಿ ಇಂತಹ ಒಬ್ಬ ಮಹಾನ್ ಸಂಗೀತಗಾರನಿದ್ದ ಅನ್ನೋದೆ ಒಂದು ಹೆಮ್ಮೆಯ ವಿಷಯ.
ಇಷ್ಟೆಲ್ಲಾ ಇಂಟರ್ನೆಟ್ನಲ್ಲಿ ಬ್ರೌಸ್ ಮಾಡಿ ಮುಗಿಸಿದಾಗ 11.45 Pm ಆಗಿತ್ತು. ಒಂದುವರೆ ಗಂಟೆ ಕಂಪ್ಯೂಟರ್ ಮಾನಿಟರ್ ನೋಡಿ.. ನೋಡಿ.. ಕಣ್ಣು Strain ಆಗಿತ್ತು. Comp ಆಫ್ ಮಾಡಿ, ಲೈಟ್ ಎಲ್ಲಾ ಆಫ್ ಮಾಡಿ ಮಲಗಿದ 7-8 ನಿಮಿಷದಲ್ಲಿ ಕರೆಂಟ್ ಹೊಯೀತು. ಫ್ಯಾನ್ ಆಫ್ ಆಗೀ ಶೆಕೆ ಶುರು ಅಯೀತು... ಸರಕಾರ ಹಾಗು ಕೆ.ಯಿ.ಬಿ.ಯವರನ್ನು ಶಪಿಸಿ, ತಾನ್ಸೇನ್ ಇದ್ದಿದ್ದರೆ ಅವನನ್ನು ಒಂದು ಕಡೆ ಕೂರಿಸಿ ಪವರ್ ಸ್ಟೇಷನ್ ನಲ್ಲಿದ್ದ Turbine ಗಳು ತಿರುಗುವಂತೆ ಹೊಸ ರಾಗ ಸೃಷ್ಟಿಸಿ, ಎಲ್ಲ ಪವರ್ ಸ್ಟೇಷನ್ ಗಳಲ್ಲೂ Loud Speaker ಹಾಕಿಸಿ ಆತನಿಂದ ಆ ರಾಗ ಹಾಡಿಸಬಹುದಿತ್ತಲ್ಲಾ ಎಂದೆನಿಸಿ ನಗು ಬಂದು ಹಾಗೆ ನಿದ್ರೆಗೆ ಜಾರಿದೆ.